Call Us Now: 0824-2496214

About Us

ನಿಮ್ಮೊಂದಿಗೆ ಒಂದು ಮಾತು……

ನಮ್ಮ ಸುತ್ತಲಿನ ದಿನನಿತ್ಯದ ಸುದ್ಧಿಗಳಿಗಾಗಿ ಹತ್ತಾರು ಪತ್ರಿಕೆಗಳಿವೆ. ನೂರಾರು ವೆಬೆಸೈಟ್‍ಗಳು ಕೂಡ ಕ್ಷಣಕ್ಷಣದ ಅಪ್‍ಡೇಟ್ ನ್ಯೂಸ್ ನೀಡುತ್ತಿವೆ. ಚಿತ್ರ ಸಹಿತ ವರದಿಗಳಿಗಾಗಿ ಅದೆಷ್ಟೋ ನ್ಯೂಸ್ ಚಾನಲ್‍ಗಳಿವೆ. ಇವೆಲ್ಲದರ ಮಧ್ಯೆ ಸ್ವಲ್ಪ ವಿಭಿನ್ನವಾಗಿ ವೆಬ್ ಮ್ಯಾಗಸಿನ್ ಆರಂಭಿಸಿದರೆ ಹೇಗೆ ಎನ್ನುವ ಪ್ರಶ್ನೆಗೆ ಕಂಡುಕೊಂಡ ಉತ್ತರವೇ newmangalurutimes.com

ಇದೊಂದು ಪುಟ್ಟ ಪ್ರಯತ್ನ. ನಾಲ್ಕು ವರುಷಗಳ ಹಿಂದೆ ಆರಂಭಿಸಿರುವ ವೆಬ್‍ನ್ಯೂಸ್ ಪೋರ್ಟಲ್ ಪತ್ರಿಕೆಯನ್ನು ನೀತಿ, ನಿಯಮಗಳಿಗೆ ಅನುಗುಣವಾಗಿ, ವ್ಯವಸ್ಥಿತ ರೀತಿಯಲ್ಲಿ ಮಾಡುವ ಯತ್ನವಿದು. ಇಲ್ಲಿ ದಿನ ನಿತ್ಯದ ಸುದ್ಧಿಗಳಿರುವುದಿಲ್ಲ. ಆದರೆ ಸುದ್ಧಿಗಳ ಆಗುಹೋಗುಗಳ ಬಗ್ಗೆ ಒಂದು ವಿಶ್ಲೇಷಣೆ ಇರುತ್ತದೆ. ರಾಜಕೀಯವಾಗಿ ಪಕ್ಷಪಾತಿಯಲ್ಲ. ರಾಜಕೀಯ ಪಕ್ಷಗಳ, ನಾಯಕರ ಒಳ, ಹೊರನೋಟಗಳ ವಿವರಗಳಿರುತ್ತದೆ.

ಸಮಾಜದಲ್ಲಿ ಹಲವರ ವ್ಯಕ್ತಿತ್ವ, ಕೆಲವು ವಿಷಯಗಳು ನಾನಾ ಕಾರಣಗಳಿಗಾಗಿ ತುಂಬಾ ಇಂಟರೆಸ್ಟಿಂಗ್ ಅನ್ನಿಸಿಬಿಡುತ್ತದೆ. ಇಂತಹ ವಿಶೇಷ ಘಟನೆಗಳ ನೆನಪುಗಳನ್ನು ವರ್ತಮಾನದೊಂದಿಗೆ ತಳಕು ಹಾಕಿ ಭವಿಷ್ಯದಲ್ಲಿ ಕುತೂಹಲ ಮೂಡಿಸಲು ಈ ವೆಬ್ ಮ್ಯಾಗಸಿನ್‍ನಿಂದ ಸಾಧ್ಯವಾದೀತು ಎಂಬ ನಿರೀಕ್ಷೆ ನನ್ನದು. ಬದುಕಿನ ಜೊತೆಜೊತೆಯಲ್ಲೇ ಇರುವ ಸಂತೋಷ, ಸಂಕಟ, ಅವಮಾನ, ಆತಂಕ, ಸೋಲಿನ ಭೀತಿಯ ನಡುವೆಯೂ ಗೆಲುವನ್ನು ಸಾಧಿಸುವುದು ಹೇಗೆ? ಹೊಸ ಗುರಿಯನ್ನು ತಲುಪುವುದು ಹೇಗೆ? ಎಂದು ಸಲಹೆ ನೀಡುವ ಪ್ರಜ್ಞಾವಂತ, ಪ್ರಾಮಾಣಿಕ ಗೆಳೆಯರ ಗುಂಪೊಂದು ನನ್ನೊಂದಿಗಿದೆ. ಹಾಗಾಗಿ ನನ್ನ ಈ ಪುಟ್ಟ ಪ್ರಯತ್ನದಲ್ಲಿ ನಾನು ಗೆಲ್ಲಬಲ್ಲೆ ಎಂಬ ವಿಶ್ವಾಸವಿದೆ. ಮಾಡುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸುಗಳಿಸಬಲ್ಲೆ ಎಂಬ ನಿರೀಕ್ಷೆಯೂ ಇದೆ. ಗೆಲುವಿನ ಸಿದ್ಧತೆಗಳನ್ನು ಇವತ್ತಿನಿಂದಲೇ ಆರಂಭಿಸಿದ್ದೇನೆ. ಪ್ರತಿ ತಿಂಗಳ 15 ಮತ್ತು 30ನೇ ತಾರೀಖಿನಂದು ಪತ್ರಿಕೆ ಹೊರಬರಲಿದೆ. ಕ್ರಮೇಣ ಇದನ್ನು ವಾರಪತ್ರಿಕೆಯಾಗಿ ಬದಲಾಯಿಸಬಹುದಾ ಎಂಬ ಯೋಚನೆಯೂ ನನ್ನಲಿದೆ.

ಭ್ರಷ್ಟರ ಬಗ್ಗೆ ಒಂದು ದಿವ್ಯ ನಿರ್ಲಕ್ಷ್ಯ, ಪ್ರಾಮಾಣಿಕರ ಬಗ್ಗೆ ಒಳ್ಳೆಯ ಮಾತು ಪತ್ರಿಕೆಯಲ್ಲಿರುತ್ತದೆ. ಯಾರನ್ನೂ ನೋಯಿಸದೆ, ಕಾಡದೆ ಮತ್ತು ಯಾರ ಬಳಿಯೂ ಕೈಚಾಚದೆ ಕೂಡ ನನ್ನ ಈ ಪ್ರಯತ್ನದಲ್ಲಿ ಯಶಸ್ಸುಗಳಿಸಬಹುದಾ ಎಂಬ ಪ್ರಶ್ನೆಯೂ ನನ್ನಲಿದೆ. ಉತ್ತರಿಸಲು ನೀವಿದ್ದೀರಿ. ಹತ್ತು ಹಲವು ಪ್ರಾಯೋಗಿಕ ಸಂಚಿಕೆಯ ಬಳಿಕ ವ್ಯವಸ್ಥಿತ ರೀತಿಯಲ್ಲಿ ಪತ್ರಿಕೆ ಹೊರಬರುತ್ತಿದೆ. ಸ್ವಲ್ಪ ಬದಲಾವಣೆ, ಹೆಚ್ಚು ಆಕರ್ಷಣೆಗೆ ಯತ್ನವೂ ನಡೆದಿದೆ. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ. ಟೀಕೆ-ಟಿಪ್ಪಣಿಗಳಿಗೆ ಸುಸ್ವಾಗತ.

ಪೂರ್ಣಚಂದ್ರ